ನರಿಂಗಾನ: ಜಿಲ್ಲೆಯಾದ್ಯಂತ 1,000 ಕಿಂಡಿ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಕಳೆದ ವರ್ಷದ ಬರ ಪರಿಸ್ಥಿತಿಯನ್ನು ಮನಗಂಡು ರಾಜ್ಯ ಸರಕಾರ ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಕೃಷಿಗೆ ಪೂರಕವಾಗಿ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಮಹಾತ್ಮಾ ಗಾಂಧಿ ರಾಷ್ಟಿ ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ನೆತ್ತಿಲ ಬಾಳಿಕೆಯಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಅಣೆಕಟ್ಟು ನಿರ್ಮಾಣದ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಾದ್ಯಂತ ನೇತ್ರಾವತಿ ನದಿ ಹರಿಯುತ್ತಿದ್ದರೂ, ಜನರಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿತ್ತು. ಕೃಷಿ ಚಟುವಟಿಕೆಗೂ ಬಹಳ ತೊಂದರೆಯಾಗಿತ್ತು. ಕೊಳವೆ ಬಾವಿಗಳ ನಿರ್ಮಾಣದಿಂದ ಭೂಮಿಯ ಮೇಲೆ ಮಾನವ ಅತ್ಯಾಚಾರ ನಡೆಸುವಂತಹ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನಲ್ಲಿ 600 ಅಡಿಯಷ್ಟು ಕೊಳವೆ ಬಾವಿ ನಿರ್ಮಿಸುವ ಮೂಲಕ ಜಿಲ್ಲೆಗೂ ಕೋಲಾರ ಜಿಲ್ಲೆಗೆ ವ್ಯತ್ಯಾಸವಿಲ್ಲದಂತೆ ಮಾಡಲಾಗಿದೆ. ಜನ ಎಚ್ಚೆತ್ತು ಮಳೆಯ ನೀರು ನಿಲ್ಲಿಸಿ ಇಂಗಿಸಿದಲ್ಲಿ ಅಂತರ್ಜಲವನ್ನು ಹೆಚ್ಚಿಸಲು ಸಾಧ್ಯ. ಇದರಿಂದ ಹಸಿರು ವಾತಾವರಣ ನಿರ್ಮಿಸಿ ಜನರಲ್ಲಿ ನಗುವಿನ ವಾತಾವರಣ ಜತೆಗೆ ನೆಮ್ಮದಿಯನ್ನು ಕಾಣಲು ಸಾಧ್ಯ. ನರಿಂಗಾನ ಪಂಚಾಯಿತಿನಲ್ಲಿ 564 ಮಂದಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸಲು ನೋಂದಾಯಿಸಿಕೊಂಡಿದ್ದಾರೆ.
ಗ್ರಾಮಸ್ಥರ ಉತ್ತಮ ಬೆಂಬಲವಿರುವ ಪಂಚಾಯಿತಿನಲ್ಲಿ ಎರಡು ಅಣೆಕಟ್ಟುಗಳ ರಚನೆಗೂ ಚಿಂತನೆ ನಡೆಸಲಾಗುವುದು. ಅಲ್ಲದೆ ಎಲ್ಲಾ ಜಿಲ್ಲಾ ಪಂಚಾಯಿತಿ ಸದಸ್ಯರು ನೀರು ನಿಲ್ಲುವಂತಹ ಪ್ರದೇಶಗಳಲ್ಲಿ ಕನಿಷ್ಠ ಐದು ಅಣೆಕಟ್ಟುಗಳಿಗೆ ಸ್ಥಳಗಳನ್ನು ಗುರುತಿಸುವಂತೆ ಸೂಚಿಸಲಾಗುವುದು ಎಂದ ಅವರು ಪ್ರಸಕ್ತ ವರ್ಷದಲ್ಲಿ 44 ಕೋಟಿ ರೂ. ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬಳಸಲು ಜಿ.ಪಂ ಮುಂದಾಗಿದ್ದು, ಇದರಲ್ಲಿ 20,000 ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ನೆತ್ತಿಲಬಾಳಿಕೆ ಕೆರೆಯ ಹೂಳೆತ್ತಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ ಮಾತನಾಡಿ ಕುರ್ನಾಡು ಪ್ರದೇಶದಲ್ಲಿ ನೀರಿನ ಬರಗಾಲ ಎದುರಾಗಿದ್ದು, ಮಳೆ ಬಂದರೂ ನೀರನ್ನು ಉಳಿಸಲು ಸಾಧ್ಯವಾಗುತ್ತಿಲ್ಲ ಆ ನಿಟ್ಟಿನಲ್ಲಿ ನರಿಂಗಾನ ಗ್ರಾಮದಲ್ಲಿ ಹರಿದು ಹೋಗುವ ನೀರನ್ನು ಉಳಿಸಲು ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಜಿಲ್ಲಾ ಪಂಚಾಯತ್ ಹೆಚ್ಚಿನ ಮುತುವರ್ಜಿ ವಹಿಸಿದೆ. ಇಂತಹ ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ನೀರಿನ ಅಂತರ್ಜಲ ಹೆಚ್ಚಿಸಿ ಕೃಷಿ ಹಾಗೂ ಕುಡಿಯಲು ಸಮರ್ಪಕವಾದ ನೀರನ್ನು ಗ್ರಾಮದ ಜನರಿಗೆ ಒದಗಿಸಲು ಸಾಧ್ಯ. ನೆತ್ತಿಲಬಾಳಿಕೆ ಪ್ರದೇಶದಲ್ಲಿ 60 ಸೆಂಟ್ಸ್ ವಿಸ್ತೀರ್ಣದ ಕೆರೆಯಿದ್ದು ಅದನ್ನು ಅಭಿವೃದ್ಧಿ ಪಡಿಸಿದ್ದಲ್ಲಿ ನೆರೆಯ ಕಿನ್ಯಾ ಗ್ರಾಮದವರಿಗೂ ನೀರು ಪೂರೈಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ವಹಿಸಿದ್ದರು. ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗ ಸಹಾಯಕ ಕಾರ್ಯಕಾರಿ ಅಭಿಯಂತರ ನರೇಂದ್ರ ಬಾಬು, ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಿರಾಂದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ಆರ್. ಉಮೇಶ್, ಇಲಾಖಾ ಮಟ್ಟದ ಕಾರ್ಯ ನಿರ್ವಹಣ ಅಧಿಕಾರಿ ಸಿಪ್ರಿಯನ್ ಮಿರಾಂದ, ಹಿರಿಯರಾದ ಪದ್ಮನಾಭ ನರಿಂಗಾನ, ನೆತ್ತಿಲಬಾಳಿಕ ಮನೆತನದ ಕೆ.ಸಿ.ಆಳ್ವ, ನರಿಂಗಾನ ಪಂ. ಸದಸ್ಯರಾದ ಮುರಳೀಧರ ಶೆಟ್ಟಿ, ಅಬ್ದುಲ್ ರಹಿಮಾನ್, ಸುಮನ, ಬೇಬಿ, ಉಮ್ಮರ್ ಕುಂಞÂ, ಅಬ್ದುಲ್ ಲತೀಫ್, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ ಇಸ್ಮಾಯಿಲ್ ಮಿನಂಕೋಡಿ ಸ್ವಾಗತಿಸಿದರು. ಶಿಕ್ಷಕ ಬಿ.ಕೆ.ವಸಂತಾ ರೈ ಕಾರ್ಯಕ್ರಮ ನಿರೂಪಿಸಿದರು.