ಉಚ್ಚಿಲ: ಸೋಮೇಶ್ವರ ಉಚ್ಚಿಲದ ಕಡಲ್ಕೊರೆತ ತಡೆ ಯೋಜನೆಗೆ ಪರಿಣತ ಸಮಿತಿಯಿಂದ ಸಲಹೆ ಪಡೆದು ಟೆಂಡರ್ ಕರೆಯಲಾಗಿದ್ದು, ಮುಂಗಾರು ಮುಗಿದ ತಕ್ಷಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದರು.
ಅವರು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಮುದ್ರ ತೀರದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಸೋಮೇಶ್ವರ ಉಚ್ಚಿಲ ಸಮುದ್ರ ತೀರಕ್ಕೆ ಭೇಟಿ ನೀಡಿದರು.
ಉಳ್ಳಾಲ ಭಾಗದಲ್ಲಿ ಬ್ರೇಕ್ ವಾಟರ್ ಕಾಮಗಾರಿ ಕೈಗೊಂಡ ಬಳಿಕ ಸೋಮೇಶ್ವರ ಉಚ್ಚಿಲ ತೀರದಲ್ಲಿ ಅನೇಕ ಮನೆಗಳು ಸಮುದ್ರಪಾಲಾಗಿವೆ. ಇಲ್ಲಿನ ಸಮುದ್ರ ತಡೆ ಯೋಜನೆ ರೂಪಿಸಲು ಪರಿಣತ ತಂಡದಿಂದ ಸಲಹೆಯನ್ನು ಪಡೆಯಲಾಗಿದೆ. ಅದಕ್ಕಾಗಿ ಹೆಚ್ಚುವರಿ 4 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ. ತಾಂತ್ರಿಕತೆ, ಹಣಕಾಸು ವ್ಯವಸ್ಥೆ ಸಿದ್ಧಗೊಳ್ಳುತ್ತಿದ್ದಂತೆ ಮುಂಗಾರು ಕಳೆದ ತಕ್ಷಣ ಕಾಮಗಾರಿಯನ್ನು ಆರಂಭಿಸುವುದಾಗಿ ಹೇಳಿದರು.
ಈ ಸಂದರ್ಭ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್.ಲೋಬೊ, ನಗರಸಭೆ ಸದಸ್ಯರು, ಸೋಮೇಶ್ವರ ಪಂ. ಸದಸ್ಯರು ಹಾಗೂ ಬಂದರು ಅಧಿಕಾರಿಗಳು ಉಪಸ್ಥಿತರಿದ್ದರು.