Site icon Ullalavani

ತೊಕ್ಕೊಟ್ಟು :ಕರ್ಣಾಟಕ ಬ್ಯಾಂಕಿಗೆ ಕಿಡಿಗೇಡಿಗಳಿಂದ ಬೆಂಕಿ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಕರ್ಣಾಟಕ ಬ್ಯಾಂಕ್ ನ ತೊಕ್ಕೊಟ್ಟು ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ತಡರಾತ್ರಿ ವೇಳೆ ನಡೆದಿದ್ದು, ಘಟನೆಯಲ್ಲಿ ಹಲವು ದಾಖಲೆಗಳು ಸುಟ್ಟುಹೋಗಿವೆ.

ತೊಕ್ಕೊಟ್ಟು ಒಳಪೇಟೆಯಲ್ಲಿರುವ ಕರ್ಣಾಟಕ ಬ್ಯಾಂಕಿನಲ್ಲಿ ನಿನ್ನೆ ತಡರಾತ್ರಿ 10.00 ಗಂಟೆ ಸುಮಾರಿಗೆ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಉಳ್ಳಾಲ ಪೊಲೀಸರಿಗೆ ಮತ್ತು ಅಗ್ನಿ ಶಾಮಕ ಸಿಬ್ಬಂದಿಗೆ ದೂರು ನೀಡಿದ್ದಾರೆ. ಅಷ್ಟರಲ್ಲಿ ಬೆಂಕಿ ಕಿಟಕಿಯಿಂದ ಹೊರ ವ್ಯಾಪಿಸಿದ್ದು, ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಬೆಂಕಿಯ ಕೆನ್ನಾಲೆ ಬ್ಯಾಂಕಿನ ಒಳಗಡೆಯೇ ದಟ್ಟವಾಗಿ ವ್ಯಾಪಿಸಿತ್ತು. ಈ ವೇಳೆ ದಾಖಲೆಗಳು, ಪೀಠೋಪಕರಣಗಳು ಬೆಂಕಿಗೆ ಆಹುತಿಯಾಯಿತು.

ಕಿಟಕಿ ಮೂಲಕ ಕಿಚ್ಚು: ಬ್ಯಾಂಕಿನ ಹಿಂಬದಿಯ ಕಿಟಕಿ ಮೂಲಕ ಬೆಂಕಿ ಹಾಕಿರುವ ಸಾಧ್ಯತೆಗಳಿದ್ದು, ಅದರಂತೆ ಪೊಲೀಸರು ಕಿಟಕಿ ಸಮೀಪ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಭಾನುವಾರ ತಡರಾತ್ರಿ ಇಲ್ಲೇ ಸಮೀಪ ದಾರಿಬದಿಯಲ್ಲಿರುವ ಮೂರು ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಫೆ.24ರಂದು ಕರ್ಣಾಟಕ ಬ್ಯಾಂಕಿನಿಂದ ಕೆಲ ಮೀ. ಅಂತರದಲ್ಲಿರುವ ಸಿಪಿಎಂ ಕಚೇರಿಗೂ ಬೆಂಕಿ ಹಚ್ಚಲಾಗಿತ್ತು. ನಿರಂತರ ಘಟನೆಯಿಂದಾಗಿ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

Exit mobile version