Site icon Ullalavani

ಜಿಲ್ಲಾಧಿಕಾರಿ ತುರ್ತು ಸಭೆ; ತಲಪಾಡಿ ಬಂದ್ ಹಿಂತೆಗೆತ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತಲಪಾಡಿ: ತಲಪಾಡಿ ಟೋಲ್ ಗೇಟ್ ವಿರೋಧಿಸಿ ಕರ್ನಾಟಕ ಹಾಗೂ ಕೇರಳದ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಬಂದ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ತುರ್ತು ಸಭೆಯಿಂದಾಗಿ ರದ್ದುಗೊಂಡಿದ್ದು, ಸಾಂಕೇತಿಕ ಪ್ರತಿಭಟನೆ ಮಾತ್ರ ನಡೆಯುವ ಮೂಲಕ ಜನಜೀವನ, ಬಸ್ಸು ಸಂಚಾರ ಸಹಜ ಸ್ಥಿತಿಯಲ್ಲಿತ್ತು.


ಮೂಲಭೂತ ಸೌಕರ್ಯಗಳ ಆಗ್ರಹಿಸಿ, ಸಿಬ್ಬಂದಿ ದೌರ್ಜನ್ಯ ವಿರೋಧಿಸಿ ಹಾಗೂ ಸ್ಥಳೀಯ ವಾಹನಗಳನ್ನು ಸುಂಕ ರಹಿತವಾಗಿ ಟೋಲ್ ಪ್ಲಾಝಾದಲ್ಲಿ ಬಿಡುವಂತೆ ಬೇಡಿಕೆಗಳನ್ನು ಮುಂದಿಟ್ಟು ಗಡಿನಾಡು ರಕ್ಷಣಾ ವೇದಿಕೆ, ಕನ್ನಡ ರಕ್ಷಣಾ ವೇದಿಕೆ, ಸ್ಥಳೀಯ ಸಂಘಟನೆಗಳು ಹಾಗೂ ಕಾಂಗ್ರೆಸ್ ಮುಖಂಡರು ತಲಪಾಡಿಯಿಂದ ತೊಕ್ಕೊಟ್ಟುವರೆಗೆ ರಾ.ಹೆ.66 ಬಂದ್ ಗೆ ಕರೆ ನೀಡಿದ್ದರು. ಈ ಬಗ್ಗೆ ಪೊಲೀಸ್ ಇಲಾಖೆ ಶುಕ್ರವಾರ ತಡರಾತ್ರಿಯೇ ಹೋರಾಟಗಾರರನ್ನು ಮತ್ತು ನವಯುಗ ಕಂಪೆನಿಯ ಅಧಿಕಾರಿಗಳನ್ನು ಉಳ್ಳಾಲ ಪೊಲೀಸ್ ಠಾಣೆಗೆ ಕರೆಸಿ ಸಭೆ ನಡೆಸಿತ್ತು. ಅಲ್ಲದೆ ಬಂದ್ ನಡೆಸದಂತೆ ಪೊಲೀಸರು ಹೋರಾಟಗಾರರಿಗೆ ಸೂಚಿಸಿದ್ದರು. ಆದರೆ ಹೋರಾಟಗಾರರು ಬೇಡಿಕೆ ಈಡೇರದಿದ್ದಲ್ಲಿ ಬಂದ್ ಆಚರಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿಸಿದಾಗ ಬಂದ್ ಆಚರಿಸದಂತೆ ಅಲ್ಲದೆ ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತುರ್ತು ಸಭೆಯನ್ನು ಕರೆದಿದ್ದು, ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ಶನಿವಾರ ಬೆಳಿಗ್ಗೆ ತಲಪಾಡಿಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ಕೇರಳದ 4 ರಷ್ಟು ಸಾರಿಗೆ ಬಸ್ಸುಗಳನ್ನು ತಡೆಹಿಡಿದರು. ಆ ಬಳಿಕ ಜಿಲ್ಲಾಧಿಕಾರಿಯ ಸಭೆಯ ವಿಶ್ವಾಸದಿಂದ ಬಂದ್ ಆಚರಣೆಯನ್ನು ಹಿಂಪಡೆದುಕೊಂಡ ಸಂಘಟನೆಗಳು ತಲಪಾಡಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈಡೇರಿದ ಬೇಡಿಕೆ
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ನವಯುಗ ಕಂಪೆನಿಯ ಅಧಿಕಾರಿಗಳು ಭಾಗಿಯಾಗಿ, 5 ಕಿ.ಮೀ ವರೆಗಿನ ನಿವಾಸಿಗಳಿಗೆ ಸುಂಕ ರಹಿತ ಪ್ರಯಾಣಿಸಲು ಅನುಮತಿ ಹಾಗೂ 20 ಕಿ.ಮೀ ದೂರದವರಿಗೆ ಮಾಸಿಕ ರೂ. 230 ರ ಪಾಸ್ ಒದಗಿಸುವುದಾಗಿಯೂ , ಎಳೆಯ ಟೂರಿಸ್ಟ್ , ಗೂಡ್ಸ್ ವಾಹನಗಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಸರಿಪಡಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ರಾ.ಹೆ.66ರ ಕಾಮಗಾರಿಯನ್ನು ಜೂನ್ ತಿಂಗಳಿನಲ್ಲಿ ಮುಗಿಸುವ ವಿಶ್ವಾಸವನ್ನು ನೀಡಿದ್ದಾರೆ. ಈ ಮೂಲಕ ಬಹುಮುಖ್ಯ ಬೇಡಿಕೆಗಳು ಈಡೇರಿಕೆ ಆಗಿರುವುದರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Exit mobile version