ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಬಿಜೆಪಿ ಸದಸ್ಯರನ್ನೇ ಗುರುತಿಸಿ ಏಕಾಏಕಿ ಅವರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಆರೋಪಿಸಿ ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಉಳ್ಳಾಲ ನಗರಸಭೆಯ ಕಂದಾಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಉಳ್ಳಾಲ ನಗರಸಭೆಯಲ್ಲಿ ಗುರುವಾರ ಸಂಜೆ ವೇಳೆ ನಡೆದಿದೆ.
ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಎಸ್.ಐ ರಾಜೇಂದ್ರ ಅವರು ಸಮಾಧಾನ ಪಡಿಸಿದರೂ ಬಿಜೆಪಿ ಕಾರ್ಯಕರ್ತರು ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಆದರೆ ಚುನಾವಣೆ ವಿಚಾರ ಆಗಿರುವುದರಿಂದ ಚುನಾವಣಾ ಆಯೋಗ ಅಥವಾ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಬಹುದು ಎಂದು ಪೆÇಲೀಸ್ ಅಧಿಕಾರಿಯೂ ಪ್ರತಿಕ್ರಿಯಿಸಿದರು. ಆದರೆ ಪಟ್ಟುಬಿಡದ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಸಹಾಯಕ ಕಮೀಷನರ್ ಬಂದು ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು. ಒಂದು ಗಂಟೆಯ ಬಳಿಕ ಸ್ಥಳಕ್ಕೆ ಸಹಾಯಕ ಕಮೀಷನರ್ ಬಂದರೂ, ಜಿಲ್ಲಾಧಿಕಾರಿಯವರ ಬಳಿ ಚರ್ಚಿಸುವಂತೆ ಹೇಳಿದರು. ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಇವರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ಸಂಜೆಯ ಸಮಯವಾಗಿರುವುದರಿಂದ ಚುನಾವಣಾ ಅಧಿಕಾರಿಗಳು ಕಚೇರಿಯಿಂದ ತೆರಳಿರುವುದರಿಂದ ಏನು ಮಾಡಲು ಸಾಧ್ಯವಿಲ್ಲ. ನಾಳೆ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆಯೂ, ಅವರೊಡನೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ಈ ಸಂದರ್ಭ ಬಿಜೆಪಿ ಕ್ಷೇತ್ರ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಅಭ್ಯರ್ಥಿ ಚಂದ್ರಹಾಸ್ ಪಂಡಿತ್ ಹೌಸ್, ಹರೀಶ್ , ಜೀವನ್ ಕುಮಾರ್ ತೊಕ್ಕೊಟ್ಟು, ದಯಾನಂದ ತೊಕ್ಕೊಟ್ಟು, ಪೆÇಡಿಮೋನು, ಹನೀಫ್ ಮೊದಲಾದವರು ಇದ್ದರು.
ಉದ್ದೇಶಪೂರ್ವಕವಾಗಿ ಅಳಿಸಲಾಗಿದೆ: ಬೋಳಿಯಾರ್
ಎರಡು ವಾರ್ಡುಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಅನ್ನುವ ಭೀತಿಯಿಂದ ಹೀನಾಯ ರಾಜಕೀಯಕ್ಕೆ ಇಳಿದಿರುವ ವಿರೋಧಿಗಳು ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ನಾಳೆಯಿಂದ ಬಹಿರಂಗ ಪ್ರಚಾರವಿಲ್ಲ, ಭಾನುವಾರ ನ್ಯಾಯಾಲಯ ಬಂದ್ . ಸೋಮವಾರ ಮತದಾರರು ಚುನಾವಣೆ ಎದುರಿಸಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಉದ್ದೇಶಪೂರ್ವಕವಾಗಿ ಏಕಾಏಕಿ ಬುಧವಾರದಂದು 343 ಮತದಾರರನ್ನು ಪಟ್ಟಿಯಿಂದಲೇ ಅಳಿಸಿದ್ದಾರೆ. ಅವರನ್ನು ಅಳಿಸಿರುವ ಕಾರಣವನ್ನು ಪಡೆಯದೆ ಅಧಿಕಾರಿಗಳು ಕ್ರಮ ಕೈಗೊಂಡಿರುವುದು ಬಿಜೆಪಿಗೆ ಎಸಗಿರುವ ದ್ರೋಹವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುವ ಸರಕಾರದ ಸಚಿವರ ಕುಮ್ಮಕ್ಕಿನಿಂದಲೇ ಇಂತಹ ಅನ್ಯಾಯ ನಡೆದಿದೆ. ನ್ಯಾಯ ಸಿಗುವವರೆಗೆ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ.
ಸಂತೋಷ್ ಕುಮಾರ್ ರೈ ಬೋಳಿಯಾರ್
ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರು
24 ನೇ ವಾರ್ಡಿನ ಸೇವಂತಿಗುಡ್ಡೆಯಲ್ಲಿ ನೆರೆಮನೆಯವರೆಲ್ಲರಿಗೂ ಮತ ಚಲಾಯಿಸುವ ಹಕ್ಕಿದೆ. ನನಗೂ ಹಕ್ಕಿದೆ ಆದರೆ ಒಂದೇ ಮನೆಯಲ್ಲಿರುವ ಪತ್ನಿಯ ಹೆಸರನ್ನು ಅಳಿಸಲಾಗಿದೆ. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿರುವ ಪತ್ನಿಯನ್ನು ಮತದಾರರ ಪಟ್ಟಿಯಿಂದ ಅಳಿಸಿರುವುದು ಅನ್ಯಾಯ. ನ್ಯಾಯ ಒದಗಿಸಬೇಕಾದ ಅಧಿಕಾರಿಗಳೇ ಇಂತಹ ಅನ್ಯಾಯ ಎಸಗುವುದರಲ್ಲಿ ಅರ್ಥವಿಲ್ಲ
ಮೋಹನ್
ಸೇವಂತಿಗುಡ್ಡೆ ನಿವಾಸಿ